Please enable javascript.ಹಾಲು ಕುಡಿಯದ ಮಕ್ಕಳಿಗೆ ಮಜ್ಜಿಗೆ - buttermilk for balavadi kids - Vijay Karnataka

ಹಾಲು ಕುಡಿಯದ ಮಕ್ಕಳಿಗೆ ಮಜ್ಜಿಗೆ

ವಿಕ ಸುದ್ದಿಲೋಕ | 22 Jan 2017, 12:48 pm
Subscribe

ಕ್ಷೀರಭಾಗ್ಯದ ಹಾಲಿನ ಪೌಡರ್‌ ಅನ್ನು ಶಿಕ್ಷಕರು, ಅಡುಗೆ ಸಹಾಯಕರು ಮನೆಗೆ ಹೊತ್ತೊಯ್ಯುವ ಸುದ್ದಿಗಳು ನೀವು ಕೇಳಿರಬಹುದು.

buttermilk for balavadi kids
ಹಾಲು ಕುಡಿಯದ ಮಕ್ಕಳಿಗೆ ಮಜ್ಜಿಗೆ
ಎಂ.ಎನ್‌.ಅಹೋಬಳಪತಿ ಚಿತ್ರದುರ್ಗ : ಕ್ಷೀರಭಾಗ್ಯದ ಹಾಲಿನ ಪೌಡರ್‌ ಅನ್ನು ಶಿಕ್ಷಕರು, ಅಡುಗೆ ಸಹಾಯಕರು ಮನೆಗೆ ಹೊತ್ತೊಯ್ಯುವ ಸುದ್ದಿಗಳು ನೀವು ಕೇಳಿರಬಹುದು. ಆದರೆ ಮಕ್ಕಳು ಬಳಸಿದಿದ್ದರೂ ವ್ಯವಸ್ಥಿತವಾಗಿ ಮಕ್ಕಳಿಗೆ ಉಣಬಡಿಸುತ್ತಿರುವ ವ್ಯವಸ್ಥೆಯನ್ನು ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಣಬಹುದು.

ಶೈಕ್ಷಣಿಕ ವರ್ಷದ ಆರಂಭದಿಂದಲೂ ಮಕ್ಕಳಿಗೆ ಮೊಸರು, ಮಜ್ಜಿಗೆ ಮಾಡಿ ಮಕ್ಕಳಿಗೆ ವಾರವಿಡೀ ಉಣ ಬಡಿಸುತ್ತಿದ್ದಾರೆ.

'ಶಾಲೆಯಲ್ಲಿ ವಾರಕ್ಕೆ ಮೂರು ದಿನ ಹಾಲು ಕೊಡುತ್ತೇವೆ. ಅರ್ಧಕ್ಕರ್ಧ ಮಕ್ಕಳು ಹಾಲು ಕುಡಿಯುತ್ತಿರಲಿಲ್ಲ. ಹಾಲಿನ ಪೌಡರ್‌ ಹೆಚ್ಚುವರಿ ಆಗುತ್ತಿತ್ತು. ಆಗ ಮೊಸರು ಮಾಡಿ ಊಟಕ್ಕೆ ಬಡಿಸುವ ಆಲೋಚನೆ ಬಂತು. ಈ ವರ್ಷದ ಶೈಕ್ಷಣಿಕ ವರ್ಷದ ಆರಂಭದಿಂದಲೂ ಇದನ್ನು ಅನುಸರಿಸುತ್ತಿದ್ದೇವೆ' ಎಂದು ಮುಖ್ಯೋಪಾಧ್ಯಾಯ ಗುರುನಾಥ್‌ ಹೇಳಿದರು.

ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗನುಗುಣವಾಗಿ ವಾರಕ್ಕೆ ಒಂಬತ್ತು ಕೆಜಿ ಹಾಲಿನ ಪೌಡರ್‌ ನಿಗಧಿಪಡಿಸಲಾಗಿದೆ. ಇದರಲ್ಲಿ ಮೂರು ಕೆ ಜಿ ಪೌಡರ್‌ ಮೂರು ದಿನ ಹಾಲು ನೀಡಲಿಕ್ಕೆ ಸಾಕಾಗುತ್ತದೆ. ಉಳಿದ ಆರು ಕೆ ಜಿ ಪೌಡರ್‌ನಲ್ಲಿ ಮೊಸರು, ಮಜ್ಜಿಗೆ ಮಾಡುತ್ತಾರೆ. 'ಪ್ರತಿದಿನ ಮೊಸರು ನೀಡಿದರೆ ಮಕ್ಕಳು ನಿದ್ದೆ ಮಾಡುವ ಸಾಧ್ಯತೆ ಹೆಚ್ಚಿರುವ ಕಾರಣ ಮಜ್ಜಿಗೆ ನೀಡುತ್ತೇವೆ. ಉಪ್ಪಿಟ್ಟು ಮಾಡಿದ ದಿನ ಮಾತ್ರ ಜತೆಗೆ ಮೊಸರು ನೀಡುತ್ತೇವೆ' ಎಂದು ಹೇಳಿದರು.

ಹಾಲು ಕುಡಿಯದ ಮಕ್ಕಳು ಖುಷ್‌

'ಮಜ್ಜಿಗೆ ಸೇವನೆಯಿಂದ ಮಕ್ಕಳಿಗೆ ಖುಷಿಯಾಗಿದೆ. ಪ್ರತಿದಿನ ಸಾಂಬಾರ್‌, ಮಜ್ಜಿಗೆ ಎರಡನ್ನೂ ಮಾಡುವುದರಿಂದ ಮಕ್ಕಳು ಊಟಕ್ಕೆ ಸಾಂಬರ್‌, ಮಜ್ಜಿಗೆ ಅವರಿಗಿಷ್ಟವಾದುದನ್ನು ಬಡಿಸಿಕೊಂಡು ಊಟ ಮಾಡುತ್ತಾರೆ. ಊಟದ ಮೆನು ನಾವು ಫಾಲೋ ಮಾಡುತ್ತೇವೆ. ಆದರೆ, ಬಹಳಷ್ಟು ಸಾರಿ ಮಕ್ಕಳ ಇಷ್ಟದ ಮೆನು ಪ್ರಕಾರವೇ ಅಡುಗೆ ಮಾಡುತ್ತೇವೆ' ಎಂದು ತಿಳಿಸಿದರು.

ಕಬ್ಬಿಣದ ಮಾತ್ರೆ : 'ಪ್ರತಿ ಸೋಮವಾರ ನೀಡುವ ಕಬ್ಬಿಣದ ಮಾತ್ರೆಗಳನ್ನು ಆರಂಭದಲ್ಲಿ ಕೆಲ ಮಕ್ಕಳು ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಅದು ನಮ್ಮ ಗಮನಕ್ಕೆ ಬಂದಾಗ ಪ್ರತಿ ವಿದ್ಯಾರ್ಥಿ ಮುಂದೆ ನಿಂತು ಮಾತ್ರೆ ನುಂಗ ಬೇಕೆಂಬುದನ್ನು ಕಡ್ಡಾಯ ಮಾಡಿದ್ದೇವೆ. ಇದೆಲ್ಲದ ಪರಿಣಾಮ ಮಕ್ಕಳು ಆರೋಗ್ಯವಾಗಿದ್ದಾರೆ. ಕಲಿಕೆಯಲ್ಲೂ ಚುರುಕಾಗಿದ್ದಾರೆ. ಶಾಲೆಗೆ ನಿಯಮಿತವಾಗಿ ಬರುತ್ತಿದ್ದಾರೆ' ಎಂದು ತಿಳಿಸಿದರು.

ಊಟಕ್ಕೆ ಕ್ಯಾರೆಟ್‌, ಸೌತೆಕಾಯಿ : ಕೆಲ ಮಕ್ಕಳು ಊಟದಲ್ಲಿ ಬೇಯಿಸಿದ ತರಕಾರಿ ತಿನ್ನದೇ ಹೊರಗಿಡುತ್ತಾರೆ. ಎಷ್ಟು ಬಾರಿ ಮನವರಿಕೆ ಮಾಡಿದರೂ ಅದನ್ನು ತಪ್ಪಿಸುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಈಗ ಊಟದ ಜತೆ ಹಸಿ ಕ್ಯಾರೆಟ್‌ ಅಥವಾ ಸೌತೆಕಾಯಿ ಪೀಸು ನೀಡುತ್ತೇವೆ. ಇದೆಲ್ಲವನ್ನೂ ಮಕ್ಕಳಿಗೆ ಬಿಸಿಯೂಟಕ್ಕೆ ನೀಡುವ ಅನುದಾನದಲ್ಲೇ ಹೊಂದಾಣಿಕೆ ಮಾಡಿಕೊಂಡು ವ್ಯವಸ್ಥೆ ಮಾಡುತ್ತೇವೆ' ಎಂದರು.

ಮಕ್ಕಳಿಗೆ ಎಷ್ಟು ಒಳ್ಳೆಯದನ್ನು ನೀಡಲು ಸಾಧ್ಯ ಎಂದು ಎಲ್ಲ ಶಿಕ್ಷಕರೂ ಯೋಚಿಸುತ್ತೇವೆ. ಆದರೆ, ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಶೇ 10 ರಷ್ಟು ಮಕ್ಕಳ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ಚಿತ್ರದುರ್ಗ ನಗರದ ಸುತ್ತ ಇರುವ ಖಾಸಗಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

- ಗುರುನಾಥ್‌, ಮುಖ್ಯೋಪಾಧ್ಯಾಯ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ