Please enable javascript.Singer Vani Jairam Death,Singer Vani Jairam: ಹಿರಿಯ ಗಾಯಕಿ ವಾಣಿ ಜಯರಾಮ್ ವಿಧಿವಶ - veteran playback singer vani jairam passes away in chennai - Vijay Karnataka

Singer Vani Jairam: ಹಿರಿಯ ಗಾಯಕಿ ವಾಣಿ ಜಯರಾಮ್ ವಿಧಿವಶ

Authored byಅವಿನಾಶ್ ಜಿ. ರಾಮ್ | Vijaya Karnataka Web | 4 Feb 2023, 8:53 pm
Subscribe

Vani Jairam Death: ಭಾರತದ ವಿವಿಧ ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಜನಪ್ರಿಯ ಗಾಯಕಿ ವಾಣಿ ಜಯರಾಮ್ ಅವರು ವಿಧಿವಶರಾಗಿದ್ದಾರೆ. ಚೆನ್ನೈನ ನುಂಗಂಬಕ್ಕಂನಲ್ಲಿರುವ ನಿವಾಸದಲ್ಲಿ ವಾಣಿ ಜಯರಾಮ್ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನಕ್ಕೆ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ.

ಹೈಲೈಟ್ಸ್‌:

  • ಹಿರಿಯ ಗಾಯಕಿ ವಾಣಿ ಜಯರಾಮ್ ಅವರು ನಿಧನರಾಗಿದ್ದಾರೆ
  • ವಾಣಿ ಅವರು ಭಾರತದ 19 ಭಾಷೆಗಳಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದರು
  • ಗಾಯಕಿ ವಾಣಿ ಜಯರಾಮ್ ಅವರಿಗೆ ಈಚೆಗಷ್ಟೇ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು
VANI JAYARAM
Singer Vani Jairam: ಹಿರಿಯ ಗಾಯಕಿ ವಾಣಿ ಜಯರಾಮ್ ವಿಧಿವಶ
ಭಾರತೀಯ ಚಿತ್ರರಂಗ ಕಂಡ ಹೆಸರಾಂತ ಗಾಯಕಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ವಾಣಿ ಜಯರಾಮ್ ಅವರು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಚೆನ್ನೈನ ನುಂಗಂಬಕ್ಕಂನಲ್ಲಿರುವ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ. ಮೂಲಗಳ ಪ್ರಕಾರ, ಅವರ ಹಣೆಯ ಮೇಲೆ ಗಾಯವಾಗಿತ್ತು ಎನ್ನಲಾಗಿದೆ. ಈಚೆಗಷ್ಟೇ ಭಾರತದ ಮೂರನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಭೂಷಣವನ್ನು ವಾಣಿ ಜಯರಾಮ್ ಅವರಿಗೆ ಘೋಷಣೆ ಮಾಡಲಾಗಿತ್ತು.
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದ ಗಾಯಕಿ
ವಾಣಿ ಜಯರಾಂ ಅವರು 1945 ನವೆಂಬರ್ 30ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಅವರದು ಸಂಗೀತ ಕುಟುಂಬ. ಪೋಷಕರಿಂದ ಸಂಗೀತದ ಬಗ್ಗೆ ಜ್ಞಾನ ಬೆಳೆಸಿಕೊಂಡ ವಾಣಿ ಅವರು 8ನೇ ವಯಸ್ಸಿನಲ್ಲಿ ರೆಡಿಯೋದಲ್ಲಿ ಹಾಡಲು ಆರಂಭಿಸಿದರು. ಬ್ಯಾಂಕ್ ಉದ್ಯೋಗಿಯಾಗಿಯೂ ವಾಣಿ ಕೆಲಸ ಮಾಡಿದ್ದರು. ಮದುವೆಯಾದ ಮೇಲೆ ಪತಿ ಜಯರಾಮ್ ಅವರೊಂದಿಗೆ ಮುಂಬೈಗೆ ವಾಣಿ ಅವರು, ಮೊದಲು ಹಾಡಿದ್ದು ಹಿಂದಿ ಸಿನಿಮಾಗಳಿಗೆ. 1971ರಲ್ಲಿ ಹಿಂದಿಯ 'ಗುಡ್ಡಿ' ಚಿತ್ರದ ಮೂರು ಹಾಡುಗಳಿಗೆ ವಾಣಿ ಧ್ವನಿ ನೀಡಿದ್ದರು. ಆ ಚಿತ್ರಕ್ಕಾಗಿ ವಾಣಿ ಜಯರಾಂ ಹೇಳಿದ್ದ 'ಬೊಲೆ ರೆ ಪಪಿಹರಾ..' ಹಾಡು ದೊಡ್ಡ ಹಿಟ್ ಆಗಿತ್ತು. ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರು ಕೂಡ ವಾಣಿ ಅವರ ಕಂಠಸಿರಿಗೆ ಬೆರಗಾಗಿದ್ದರಂತೆ. ನಂತರ ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳ 10 ಸಾವಿರ ಹಾಡುಗಳನ್ನು ವಾಣಿ ಅವರು ಹಾಡಿದ್ದಾರೆ. 2021ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷ ತುಂಬಿತ್ತು.

K Vishwanath Death : ‘ಶಂಕರಾಭರಣಂ’ ಖ್ಯಾತಿಯ ಹಿರಿಯ ನಿರ್ದೇಶಕ, ನಟ ಕೆ.ವಿಶ್ವನಾಥ್ ಇನ್ನಿಲ್ಲ
ವಾಣಿ ಜಯರಾಮ್‌ಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ
ಗಾಯಕಿ ವಾಣಿ ಜಯರಾಮ್‌ ಅವರಿಗೆ ಗಾಯನಕ್ಕಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲೇ 'ಅಪೂರ್ವ ರಾಗಂಗಳ್' (1975) ಸಿನಿಮಾದಲ್ಲಿ ಹಾಡಿದ್ದಕ್ಕಾಗಿ ವಾಣಿ ಜಯರಾಮ್ ಅವರಿಗೆ ಮೊದಲ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಆನಂತರ 1980ರಲ್ಲಿ ತೆಲುಗಿನ 'ಶಂಕರಾಭರಣಂ' ಮತ್ತು 1991ರಲ್ಲಿ 'ಸ್ವಾತಿ ಕಿರಣಂ' ಸಿನಿಮಾಗಳ ಹಾಡುಗಳಿಗಾಗಿ ವಾಣಿ ಜಯರಾಂ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಅಂದಹಾಗೆ, ವಾಣಿ ಜಯರಾಂಗೆ ಹೆಸರು ತಂದು ಕೊಟ್ಟ 'ಶಂಕರಾಭರಣಂ', 'ಸ್ವಾತಿ ಕಿರಣಂ' ಸಿನಿಮಾಗಳನ್ನು ನಿರ್ದೇಶಿಸಿದವರು ಕೆ. ವಿಶ್ವನಾಥ್ ಅವರು. ಗುರುವಾರಷ್ಟೇ (ಫೆ.2) ವಿಶ್ವನಾಥ್ ಅವರು ನಿಧನರಾಗಿದ್ದರು. ಇದೀಗ ವಾಣಿ ಜಯರಾಂ ಅವರು ಕೂಡ ವಿಧಿವಶರಾಗಿದ್ದಾರೆ.

Jamuna Death: 'ಭೂ ಕೈಲಾಸ' ಚಿತ್ರದ ನಟಿ ಜಮುನಾ ನಿಧನ; ಕಂಬನಿ ಮಿಡಿದ ಟಾಲಿವುಡ್
ವಾಣಿ ಜಯರಾಮ್‌ಗೆ ಸಿಕ್ಕಿತ್ತು ಫಿಲ್ಮ್‌ಫೇರ್ ಪ್ರಶಸ್ತಿ
ಇನ್ನು, ವಾಣಿ ಜಯರಾಮ್ ಅವರಿಗೆ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಸಿಕ್ಕಿದೆ. ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಸರ್ಕಾರಗಳಿಂದ ರಾಜ್ಯ ಪ್ರಶಸ್ತಿಗಳನ್ನು ವಾಣಿ ಜಯರಾಮ್ ಪಡೆದುಕೊಂಡಿದ್ದರು. ಕೇಂದ್ರ ಸರ್ಕಾರವು ಈಚೆಗಷ್ಟೇ ಭಾರತದ ಮೂರನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಭೂಷಣವನ್ನು ವಾಣಿ ಜಯರಾಮ್ ಅವರಿಗೆ ಘೋಷಣೆ ಮಾಡಿತ್ತು.

Chalapathi Rao: ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್ ನಿಧನ
ವಾಣಿ ಅವರು ಜನಪ್ರಿಯ ಗೀತೆಗಳು
ಮೋಹನ ಮುರಳಿಯಾ.. (ಕನ್ನಡ)
ಈ ಸೊಗಸಾದ ಸಂಜೆ..(ಕನ್ನಡ)
ಮುತ್ತೇ ಪ್ರಥಮಾ...(ಕನ್ನಡ)
ಏಳು ಸ್ವರಗಳುಕ್ಕುಲ್.. (ತಮಿಳು)
ಮಲ್ಲೈಗೈ ಎನ್ ಮಣ್ಣನ್..(ತಮಿಳು)
ಓಕಾ ಬೃಂದಾವನಂ.. (ತೆಲುಗು)
ರೋಜಲೋ ಲೇಥಾ ರೋಜಾ..(ತೆಲುಗು)
ಅವಿನಾಶ್ ಜಿ. ರಾಮ್
ಅವಿನಾಶ್ ಜಿ. ರಾಮ್ ಅವರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... Read More
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ